ಎ.ಕೆ.ರಾಮಾನುಜನ್ :  -
1929-93. ಕನ್ನಡದ ಪ್ರಸಿದ್ಧ ಕವಿ. ಕತೆಗಾರ, ಜಾನಪದತಜ್ಞ, ಭಾಷಾವಿಜ್ಞಾನಿ; ದ್ರಾವಿಡ ಭಾಷೆಗಳಲ್ಲಿ ಪಾಂಡಿತ್ಯಹೊಂದಿ, ದ್ರಾವಿಡ ಸಂಸ್ಕøತಿಯನ್ನು ಪಾಶ್ಚಾತ್ಯ ಪ್ರಪಂಚಕ್ಕೆ ಮೊತ್ತಮೊದಲ ಬಾರಿಗೆ ಪರಿಚಯಿಸಿದ ಶ್ರೇಷ್ಠ ಭಾಷಾಂತರಕಾರ. ಇವರ ಪೂರ್ಣ ಹೆಸರು ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್. ಇವರು 1929 ಮಾರ್ಚ್ 19ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕದಿಂದ ಸ್ನಾತಕೋತ್ತರ ತರಗತಿವರೆಗೆ ಇವರು ಶಿಕ್ಷಣ ಪಡೆದದ್ದು ಮೈಸೂರಿನಲ್ಲಿ. 1950ರಲ್ಲಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿ ಬರೋಡ, ಬೆಳಗಾಂವಿ, ಮದುರೈ, ಕೊಯಿಲಾನ್ ಮೊದಲಾದೆಡೆಗಳಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ ಉಪನ್ಯಾಸಕರಾಗಿ ಕೆಲಸಮಾಡಿದರು. 1959ರಲ್ಲಿ ಸ್ಮಿತ್‍ಮಂಟ್ ವ್ಯಾಸಂಗ ವೇತನ ಹಾಗೂ ಫುಲ್‍ಬ್ರೈಟ್ ಪ್ರವಾಸ ವೇತನ ಪಡೆದು ಭಾಷಾವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯಕ್ಕೆ ತೆರಳಿದರು. ಉತ್ಪಾದನಾತ್ಮಕ ವ್ಯಾಕರಣವನ್ನು ಬರೆದು ಪಿ.ಎಚ್.ಡಿ ಪದವಿ ಗಳಿಸಿದರು (1961). ಅನಂತರ ವಿಸ್ಕಾನ್‍ಸಿನ್, ಬರ್ಕ್‍ಲಿ, ಮಿಶಿಗನ್ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಕೆಲಸಮಾಡಿ, ಷಿಕಾಗೊ ವಿಶ್ವವಿದ್ಯಾಲಯದ ``ಡಿಪಾರ್ಟ್‍ಮೆಂಟ್ ಆಫ್ ಸೌತ್ ಏಷ್ಯನ್ ಲ್ಯಾಂಗ್ವೇಜಸ್ ಆಂಡ್ ಸಿವಿಲೈಜೇಷನ್-ಈ ವಿಭಾಗದಲ್ಲಿ ಭಾಷಾವಿಜ್ಞಾನ ಪ್ರಾಧ್ಯಾಪಕರಾಗಿದ್ದು, `ಡಿಪಾರ್ಟ್‍ಮೆಂಟ್ ಆಫ್ ಲಿಂಗ್ವಿಸ್ಟಿಕ್ಸ್ ಅಂಡ್ ದಿ ಕಮಿಟಿ ಆನ್ ಸೋಷಿಯಲ್ ಥಾಟ್ ನ ಸದಸ್ಯರಾಗಿದ್ದರು.
ಇವರ ಪ್ರಥಮ ಕೃತಿ ಗಾದೆಗಳು (1955) ಬಹುಜನರ ಮನ್ನಣೆ ಪಡೆದಿತ್ತು. ಇದರಲ್ಲಿ ಗಾದೆಯ ರೂಪರಚನೆ, ಕನ್ನಡ ಗಾದೆಗಳ ವಿಶ್ಲೇಷಣೆ ಉಂಟು. ಕರ್ನಾಟಕದಲ್ಲಿ ಜಾನಪದ ಅಧ್ಯಯನದ ಬಗ್ಗೆ ವೈಜ್ಞಾನಿಕ ಮನೋಭಾವ ಅಷ್ಟಾಗಿ ಕಾಣಿಸಿಕೊಂಡಿರದ ಸಮಯದಲ್ಲಿ ಈ ಕೃತಿ ಪ್ರಕಟವಾಗಿ ಅನೇಕ ಹೊಸ ಸಂಗತಿಗಳನ್ನು ಬಿಂಬಿಸಿದ್ದು ಮಹತ್ತ್ವದ ವಿಚಾರ. ಅದುವರೆಗೆ ಹೆಚ್ಚಾಗಿ ಗ್ರಂಥಸ್ಥ ಹಾಗೂ ಜನಪದ ಗಾದೆಗಳ ಸಂಗ್ರಹಕಾರ್ಯ ನಡೆದಿತ್ತು. ಆದರೆ ಗಾದೆಗಳ ವಿಶ್ಲೇಷಣೆ ನಡೆದಿರಲಿಲ್ಲ. ಇಂದಿಗೂ ಗಾದೆಗಳನ್ನು ಕುರಿತ ಅಧ್ಯಯನಕ್ಕೆ ಈ ಕೃತಿ ಒಂದು ಉತ್ತಮ ಕೈಪಿಡಿ.
ರಾಮಾನುಜನ್ ನವ್ಯಕವಿಯಾಗಿಯೇ ಹೆಚ್ಚು ಪ್ರಸಿದ್ಧರು. `ಹೊಕ್ಕುಳಲ್ಲಿ ಹೂವಿಲ್ಲ (1969) ಇವರ ಮೊದಲನೆಯ ಕವನ ಸಂಕಲನ. ಮತ್ತು ಇತರ ಪದ್ಯಗಳು (1977). ಕುಂಟೋಬಿಲ್ಲೆ (1990) ಇವರ ಇನ್ನೆರಡು ಕವನ ಸಂಕಲನಗಳು. ನವ್ಯಪಂಥದ ಕವಿಗಳಲ್ಲಿ ತಮ್ಮದೇ ಆದ ವಿಶಿಷ್ಟ ಬಗೆಯ ಭಾಷೆಯನ್ನು ಕಾವ್ಯದ ಪ್ರಮುಖ ಲಕ್ಷಣವನ್ನಾಗಿಸಿಕೊಂಡು ಕಾವ್ಯ ಬರೆದ ಈ ಕವಿ ಕನ್ನಡ ಕಾವ್ಯ ಪ್ರಪಂಚಕ್ಕೆ ಹೊಸ ಬಗೆಯ ಕಾವ್ಯ ನೀಡಿದರು. ಪದ್ಯರಚನೆ, ಪ್ರತಿಮೆಗಳ ಸಂಯೋಜನೆ, ಭಾಷಾ ಬಳಕೆ ದೃಷ್ಟಿಯಿಂದ ರಾಮಾನುಜನ್ನರ ಕಾವ್ಯಕ್ಕೆ ವಿಶೇಷ ಸ್ಥಾನವುಂಟು.
ಕನ್ನಡ ಕಾವ್ಯವಲ್ಲದೆ, ಇಂಗ್ಲಿಷ್ ಕಾವ್ಯದ ಪರಿಚಯವಿರುವವರಿಗೆ ರಾಮಾನುಜರ ಇಂಗ್ಲಿಷ್ ಕವನಗಳು ಆಪ್ಯಾಯಮಾನವೆನ್ನಿಸಿವೆ. ತಮ್ಮ ಜೀವನದಲ್ಲಿ ಎದುರಾದ ಸಾಂಸ್ಕøತಿಕ ಸಂಘರ್ಷವನ್ನು ಈ ಇಂಗ್ಲಿಷ್ ಕವನಗಳು ನೇರವಾಗಿ ಬಿಂಬಿಸುತ್ತವೆ. ದಿ ಸ್ಟ್ರೈಡರ್ಸ್ (1966), ರಿಲೇಶನ್ಸ್ (1971), ಕಲೆಕ್ಟೆಡ್ ಪೊಯಮ್ಸ್ ಸೆಕೆಂಡ್ ಸೈಟ್-ಇವು ಇವರ ಇಂಗ್ಲಿಷ್ ಕವನ ಸಂಕಲನಗಳು. ರಾಮಾನುಜನ್ ಅವರ ಕಾವ್ಯದಲ್ಲಿ ಸಾಕ್ಷಿಪ್ರಜ್ಞೆ ಸದಾ ಎಚ್ಚರವಾಗಿರುತ್ತದೆ. ಮೊದಮೊದಲು ಬರೆದ ಕವನಗಳಲ್ಲಿ ವಿಜ್ಞಾನಿಯ ಹಾಗೆ ತಮ್ಮ ಕವನದ ವಸ್ತುವನ್ನು ಭಾವರಹಿತ ದೃಷ್ಟಿಯಿಂದ ವೀಕ್ಷಿಸುತ್ತಾರೆ. ತರುವಾಯದ ಕವನಗಳಲ್ಲಿ ಭಾವ-ಭಾರ ಪಡೆದುಕೊಂಡಿರುವ ಪದಬಳಕೆಯನ್ನು ನೋಡುತ್ತೇವೆ. ಹಾಗೆಯೇ ಈ ಕವನಗಳು ಭಾವುಕತೆಯಿಂದ ಬಿಡಿಸಿಕೊಂಡ ಕಾರಣದಿಂದಾಗಿ ಲಭಿಸಿದ ಹೊಸತನ ಓದುಗರಿಗೆ ಹೆಚ್ಚು ಆಕರ್ಷಕವಾಗಿ ಕಂಡಿವೆ.

ರಾಮಾನುಜನ್ ಶ್ರೇಷ್ಠ ಭಾಷಾಂತರಕಾರರು. ಇವರ ಭಾಷಾಂತರಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ. ಅನುವಾದ ಕ್ಷೇತ್ರದಲ್ಲಿ ತಮಿಳು ಮತ್ತು ಕನ್ನಡದಿಂದ ಇವರು ಭಾಷಾಂತರಿಸಿದ್ದೇ ಹೆಚ್ಚು. ದಿ ಇಂಟೀರಿಯರ್ ಲ್ಯಾಂಡ್ ಸ್ಕೇಪ್ (1970) ಪ್ರಾಚೀನ ತಮಿಳು ಸಂಗಂ ಸಾಹಿತ್ಯದಿಂದ ಆಯ್ದ ಭಾಗಗಳ ಅನುವಾದ. ಸ್ಪೀಕಿಂಗ್ ಆಫ್ ಶಿವ (1973) ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರರಿಂದ ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ-ಇವರ ಆಯ್ದ ವಚನಗಳ ಭಾಷಾಂತರ. ಸಾಂಗ್ ಆಫ್ ಅರ್ತ್ ಅಂಡ್ ಅದರ್ ಪೊಯಮ್ಸ್ (1968) ಎಂ. ಜಿ. ಕೃಷ್ಣಮೂರ್ತಿ ಅವರೊಡಗೂಡಿ ಗೋಪಾಲಕೃಷ್ಣ ಅಡಿಗರ ಕೆಲವು ಕವನಗಳನ್ನು ಭಾಷಾಂತರಿಸಿದ್ದಾರೆ. ಹಿಮ್ಸ್ ಫಾರ್ ದಿ ಡ್ರೋವಿಂಗ್ ಎಂಬುದು ನಮ್ಮಾಳ್ವಾರ್ ಅವರ ಕೆಲವು ಕೃತಿಗಳ ಭಾಷಾಂತರ. ಪೊಯಮ್ಸ್ ಆಫ್ ಲವ್ ಅಂಡ್ ವಾರ್ ತಮಿಳಿನ ಜನಪದ ಪ್ರಣಯ ಗೀತಗಳ ಅನುವಾದ. ಫೋಕ್ ಟೈಲ್ಸ್‍ಫ್ರಂ ಇಂಡಿಯಾ ಎಂಬುದು ಭಾರತದ ಬೇರೆ ಬೇರೆ ಭಾಷೆಗಳ ಐವತ್ತು ಜನಪದ ಕಥೆಗಳನ್ನು ಅನುವಾದಿಸಿ ಭಾರತೀಯ ಸಾಹಿತ್ಯದ ಮತ್ತೊಂದು ಸ್ವರೂಪವನ್ನು ಪಾಶ್ಚಾತ್ಯರಿಗೆ ತಿಳಿಸಿಕೊಟ್ಟಿರುವಂಥ ಕೃತಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಯು. ಆರ್. ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯನ್ನು ಇವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ಮಧುರೆಯಲ್ಲಿ ಕಂಡ ತಲೆ, ಅಣ್ಣಯ್ಯನ ಮಾನವಶಾಸ್ತ್ರ-ಇವು ಇವರ ಬಿಡಿ ಕಥೆಗಳು. ಮತ್ತೊಬ್ಬನ ಆತ್ಮಚರಿತ್ರೆ (1978) ಇವರ ಸ್ವತಂತ್ರ ಕಾದಂಬರಿ. ಹಳದಿ ಮೀನು ಎಂಬ ಕೃತಿ ಶೌರಿಯವರ ಇಂಗ್ಲಿಷ್ ಕಾದಂಬರಿಯ ಅನುವಾದ. ಇವರ ಕಥಾನಿರೂಪಣೆ ಸರಳವಾದುದು, ಆದರೂ ಹೆಚ್ಚು ಸೂಚ್ಯವಾಗಿರುವಂಥದು. ರಾಮಾನುಜನ್ ಅವರ ಗದ್ಯದ ಸೊಗಸು ಅವರಿಗೇ ವಿಶಿಷ್ಟವಾದದ್ದು. ಆಧುನಿಕ ಕನ್ನಡ ಕಥಾಸಾಹಿತ್ಯಕ್ಕೆ ಇವರ ಈ ಕೃತಿಗಳು ಉತ್ತಮ ಕೊಡುಗೆಗಳಾಗಿವೆ. ಹಾಗೆಯೇ ವಿಶೇಷವಾಗಿ ಚರ್ಚೆಗೊಳಗಾಗಿವೆ.

ರಾಮಾನುಜನ್ ಅವರಿಗೆ ಅನೇಕ ಗೌರವ ಪ್ರಶಸ್ತಿಗಳು ಲಭ್ಯವಾಗಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಇವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ (1983). ಅಮೆರಿಕದ ಮೆಕಾರ್ಥರ್ ಫೌಂಡೇಷನ್ ಇವರಿಗೆ ಜೀನಿಯಸ್ ಅವಾರ್ಡ್ ನೀಡಿ ಗೌರವಿಸಿದೆ. ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ (1976). ರಾಮಾನುಜನ್ ರಜೆಯಲ್ಲಿ ಭಾರತಕ್ಕೆ ಬಂದಾಗಲೆಲ್ಲ ಮದರಾಸು, ಧಾರವಾಡ, ಬೆಂಗಳೂರು, ಮೈಸೂರು-ಹೀಗೆ ಎಲ್ಲ ಕಡೆ ಸಂಚರಿಸಿ ಉಪನ್ಯಾಸಗಳನ್ನು ನೀಡಿ ಹೊಸ ಹೊಸ ವಿಚಾರಗಳನ್ನು ಮುಂದಿಡುತ್ತಿದ್ದರು. ಇವರು 1993 ಜುಲೈ 13ರಂದು ಅಮೆರಿಕದಲ್ಲಿ ನಿಧನಹೊಂದಿದರು.

(ಆರ್.ಎಂ.ಕೆ.)
ಪರಿಷ್ಕರಣೆ:
ಡಾ|| ರಾಮಚಂದ್ರಶರ್ಮ
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ